ಅವಲೋಕನ
ಕೋಡ್ ಪರಿಶೀಲನೆಯು pull requestಗಳು, ಕೋಡ್ ಬದಲಾವಣೆಗಳು, ಪರಿಶೀಲನೆಯಲ್ಲಿ ಕಂಡುಬಂದ ಅಂಶಗಳು, ಕಾಮೆಂಟ್ಗಳು ಮತ್ತು ತಪಾಸಣೆಗಳನ್ನು ಒಂದೇ ಕಡೆ ಒದಗಿಸುತ್ತದೆ. ಬೇರೆಯವರು ಮಾಡಿದ ಬದಲಾವಣೆಗಳನ್ನು ಪರಿಶೀಲಿಸಬಹುದು, ನಿಮ್ಮದೇ pull requestಗಳ ಕುರಿತ ಪ್ರತಿಕ್ರಿಯೆಗಳನ್ನು ಗಮನಿಸಬಹುದು ಅಥವಾ ಉತ್ತರಿಸುವ ಮೊದಲು ಬದಲಾವಣೆಯೊಂದನ್ನು ವಿವರಿಸಲು Codex ಅನ್ನು ಕೇಳಬಹುದು.
ಕೋಡ್ ಪರಿಶೀಲನೆ ಪ್ಲಗಿನ್ ಡೆಸ್ಕ್ಟಾಪ್ ಮತ್ತು ವೆಬ್ನಲ್ಲಿ ಪರಿಶೀಲನೆಗೆ ಬೆಂಬಲ ನೀಡುತ್ತದೆ. GitLab ವಿಲೀನ ವಿನಂತಿಗಳ ಪರಿಶೀಲನೆಯು ಪೂರ್ವಾವಲೋಕನ ಆವೃತ್ತಿಯಲ್ಲಿ ಲಭ್ಯವಿದೆ. GitLab ಕ್ಲೌಡ್ ಕೋಡ್ ಪರಿಶೀಲನೆಗಳು ಲಭ್ಯವಿಲ್ಲ.
ಪ್ರಾರಂಭಿಸುವ ಮೊದಲು
ನೀವು ಪರಿಶೀಲಿಸಲು ಬಯಸುವ pull request ಅನ್ನು ಪ್ರವೇಶಿಸಲು ಅನುಮತಿಯಿರುವ ರಿಪೊಸಿಟರಿ ಖಾತೆಯನ್ನು ಬಳಸಿ. ನೀವು ಏನನ್ನು ಓದಬಹುದು ಅಥವಾ ಬದಲಾಯಿಸಬಹುದು ಎಂಬುದು ನಿಮ್ಮ ರಿಪೊಸಿಟರಿ ಅನುಮತಿಗಳನ್ನು ಅವಲಂಬಿಸಿರುತ್ತದೆ.
ನಿರ್ವಾಹಕರ ನಿಯಂತ್ರಣದಲ್ಲಿರುವ ವರ್ಕ್ಸ್ಪೇಸ್ನಲ್ಲಿ, ಕೋಡ್ ಪರಿಶೀಲನೆ ಪ್ಲಗಿನ್ ಮತ್ತು ಅಗತ್ಯವಿರುವ ಅಪ್ಲಿಕೇಶನ್ ಸಂಪರ್ಕಗಳು ನಿಮಗೆ ಲಭ್ಯವಿರಬೇಕು. ಪ್ಲಗಿನ್ ಸ್ಥಾಪಿಸಿದ ಮಾತ್ರಕ್ಕೆ ರಿಪೊಸಿಟರಿಯ ಪ್ರವೇಶಾನುಮತಿ ದೊರೆಯುವುದಿಲ್ಲ.
ಪ್ಲಗಿನ್ ಸಿದ್ಧಪಡಿಸುವುದು ಮತ್ತು ವರ್ಕ್ಸ್ಪೇಸ್ ನಿಯಂತ್ರಣಗಳಿಗಾಗಿ, ChatGPT ಮತ್ತು Codex ನಲ್ಲಿ ಪ್ಲಗಿನ್ಗಳು ನೋಡಿ.
pull request ಹುಡುಕಿ
ನೀವು ರಚಿಸಿರುವ ಅಥವಾ ಪರಿಶೀಲಿಸಲು ನಿಮ್ಮನ್ನು ಕೇಳಲಾಗಿರುವ pull requestಗಳನ್ನು ಹುಡುಕಲು ಕೋಡ್ ಪರಿಶೀಲನೆ ತೆರೆಯಿರಿ. ಹುಡುಕಾಟ ಮತ್ತು ಶೋಧಕಗಳನ್ನು ಬಳಸಿ ಪಟ್ಟಿಯನ್ನು ಸೀಮಿತಗೊಳಿಸಿ, ನಂತರ ಒಂದು pull request ಆಯ್ಕೆಮಾಡಿ.
ನೀವು ಉದ್ದೇಶಿತ ಬದಲಾವಣೆಯನ್ನೇ ಪರಿಶೀಲಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ರಿಪೊಸಿಟರಿ, ಶೀರ್ಷಿಕೆ, ರಚಿಸಿದವರು ಮತ್ತು ಶಾಖೆಯನ್ನು ಪರಿಶೀಲಿಸಿ. ವಿವರಣೆಯು ರಚಿಸಿದವರ ಉದ್ದೇಶವನ್ನು ತಿಳಿಸುತ್ತದೆ; ವ್ಯತ್ಯಾಸದ ನೋಟವು ಬದಲಾಗಿರುವ ಕೋಡ್ ಅನ್ನು ತೋರಿಸುತ್ತದೆ.
ಬದಲಾವಣೆಗಳನ್ನು ಪರಿಶೀಲಿಸಿ
pull requestನ ವಿವರಣೆ ಮತ್ತು ಸಾರಾಂಶವನ್ನು ಓದಿ.
ವ್ಯತ್ಯಾಸದ ನೋಟದಲ್ಲಿ ಬದಲಾಗಿರುವ ಕಡತಗಳು ಮತ್ತು ಸಂಬಂಧಿತ ಸಾಲುಗಳನ್ನು ಪರಿಶೀಲಿಸಿ.
ಕಂಡುಬಂದ ಅಂಶಗಳು ಮತ್ತು ಈಗಾಗಲೇ ಇರುವ ಕಾಮೆಂಟ್ಗಳನ್ನು ಪರಿಶೀಲಿಸಿ.
ಪರೀಕ್ಷಾ ಫಲಿತಾಂಶಗಳು, ತಪಾಸಣೆಗಳು ಮತ್ತು ಇನ್ನೂ ಬಗೆಹರಿಯದ ವಿಲೀನ ಸಂಘರ್ಷಗಳನ್ನು ಪರಿಶೀಲಿಸಿ.
ಇನ್ನಷ್ಟು ತನಿಖೆ ಅಗತ್ಯವಿರುವ ಯಾವುದೇ ಅಂಶದ ಕುರಿತು Codex ಅನ್ನು ಕೇಳಿ.
ಸ್ವಯಂಚಾಲಿತವಾಗಿ ಕಂಡುಹಿಡಿಯಲಾದ ಅಂಶಗಳನ್ನು ಅವಲಂಬಿಸುವ ಮೊದಲು, ಅವುಗಳನ್ನು ಸಂಬಂಧಿತ ಕೋಡ್ನೊಂದಿಗೆ ತಾಳೆ ಮಾಡಿ ಪರಿಶೀಲಿಸಿ.
pull request ಕುರಿತು Codex ಅನ್ನು ಕೇಳಿ
ಬದಲಾವಣೆಗಳ ಕುರಿತು ಪ್ರಶ್ನೆಗಳನ್ನು ಕೇಳಲು ಅಥವಾ ಪರಿಶೀಲನೆಯಲ್ಲಿ ಕಂಡುಬಂದ ಅಂಶವನ್ನು ತನಿಖೆ ಮಾಡಲು pull requestನ ಸಂಭಾಷಣೆಯನ್ನು ಬಳಸಿ. ನಿಮಗೆ ಮುಖ್ಯವಾದ ಕಾರ್ಯನಡವಳಿಕೆ ಅಥವಾ ಪರಿಶೀಲನಾ ಮಾನದಂಡಗಳನ್ನು ಸೇರಿಸಿ. ಉದಾಹರಣೆಗೆ:
“ಈ ಬದಲಾವಣೆಯು ಸೈನ್ ಇನ್ ಮಾಡುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿ.”
“ದೋಷ ಸಂಭವಿಸಿದಾಗ ಕಾರ್ಯಗತಗೊಳ್ಳುವ ಹೊಸ ಕೋಡ್ ಪಥವು ದತ್ತಸಂಚಯದ ಸಂಪರ್ಕವನ್ನು ಬಿಡುಗಡೆ ಮಾಡುತ್ತದೆಯೇ ಎಂದು ಪರಿಶೀಲಿಸಿ.”
“ಪರಿಶೀಲನೆಯಲ್ಲಿ ಕಂಡುಬಂದ ಈ ಅಂಶಕ್ಕೆ ಆಧಾರವಾಗಿರುವ ಕೋಡ್ ಅನ್ನು ನನಗೆ ತೋರಿಸಿ.”
“ಈ ಪರಿಷ್ಕರಣೆಯನ್ನು ಪರಿಶೀಲನೆಯ ಪ್ರತಿಕ್ರಿಯೆಗಳೊಂದಿಗೆ ಹೋಲಿಸಿ, ಇನ್ನೂ ಪರಿಹಾರವಾಗದ ಅಂಶಗಳನ್ನು ಗುರುತಿಸಿ.”
ತಿದ್ದುಪಡಿಯನ್ನು ಸಿದ್ಧಪಡಿಸಲು ಸಹ ನೀವು Codex ಅನ್ನು ಕೇಳಬಹುದು. ನಿಮಗೆ ಬೇಕಾದ ಬದಲಾವಣೆ ಮತ್ತು ಅದರ ವ್ಯಾಪ್ತಿಯ ಮಿತಿಗಳನ್ನು ವಿವರಿಸಿ. ನಂತರ ಸಿದ್ಧವಾದ ಕೋಡ್ನ ವ್ಯತ್ಯಾಸದ ನೋಟ ಮತ್ತು ಪರೀಕ್ಷಾ ಫಲಿತಾಂಶಗಳನ್ನು ಪರಿಶೀಲಿಸಿ.
ಉದಾಹರಣೆಗೆ: “ದೋಷ ನಿರ್ವಹಣೆಯಲ್ಲಿ ಕಂಡುಬಂದ ಸಮಸ್ಯೆಯನ್ನು ಸರಿಪಡಿಸಿ. ಬದಲಾವಣೆಯನ್ನು ಈ ಕಾರ್ಯಕ್ಕೆ ಮಾತ್ರ ಸೀಮಿತಗೊಳಿಸಿ ಮತ್ತು ವಿಫಲವಾಗುವ ಸಂದರ್ಭಕ್ಕಾಗಿ ಒಂದು ಪರೀಕ್ಷೆಯನ್ನು ಸೇರಿಸಿ.”
ಕಾಮೆಂಟ್ಗಳನ್ನು ಸಲ್ಲಿಸುವ, ಬದಲಾವಣೆಗಳನ್ನು ಕಮಿಟ್ ಮಾಡುವ ಅಥವಾ ವಿಲೀನಗೊಳಿಸುವ ಮೊದಲು ಫಲಿತಾಂಶವನ್ನು ಪರಿಶೀಲಿಸಿ.
GitLab ವಿಲೀನ ವಿನಂತಿಗಳನ್ನು ಪರಿಶೀಲಿಸಿ
GitLab ಪೂರ್ವಾವಲೋಕನ ಆವೃತ್ತಿಯು ಕೋಡ್ ಪರಿಶೀಲನೆಯಲ್ಲಿ ವಿಲೀನ ವಿನಂತಿಗಳನ್ನು ಒದಗಿಸುತ್ತದೆ. ನೀವು ಬದಲಾವಣೆಗಳನ್ನು ಪರಿಶೀಲಿಸಬಹುದು ಮತ್ತು ಪರಿಶೀಲನೆಯ ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಂಡು ಅವುಗಳ ಆಧಾರದಲ್ಲಿ ಕೆಲಸ ಮಾಡಲು Codex ನೆರವು ಪಡೆಯಬಹುದು.
ನೀವು ಪರಿಶೀಲಿಸಲು ಉದ್ದೇಶಿಸಿರುವ ಖಾತೆ ಮತ್ತು ಯೋಜನೆಗಳಿಗೆ GitLab ಸಂಪರ್ಕವನ್ನು ಬಳಸಿ. ಸಂಪರ್ಕದ ಆಯ್ಕೆಗಳು ಮತ್ತು ರಿಪೊಸಿಟರಿ ಅನುಮತಿಗಳಿಗಾಗಿ, GitLab ಅನ್ನು ChatGPT ಮತ್ತು Codex ಗೆ ಸಂಪರ್ಕಿಸುವುದು ನೋಡಿ.
ಅಪ್ಲಿಕೇಶನ್ನಲ್ಲಿನ ಪೂರ್ವಾವಲೋಕನ ಆವೃತ್ತಿಯಲ್ಲಿ GitLab ಕ್ಲೌಡ್ ಕೋಡ್ ಪರಿಶೀಲನೆಗಳು ಒಳಗೊಂಡಿಲ್ಲ. GitLab ಅನ್ನು ಸಂಪರ್ಕಿಸಿದ ಮಾತ್ರಕ್ಕೆ ಅಥವಾ ಕೋಡ್ ಪರಿಶೀಲನೆಯಲ್ಲಿ ವಿಲೀನ ವಿನಂತಿ ಕಾಣಿಸಿಕೊಂಡ ಮಾತ್ರಕ್ಕೆ ಆ ರಿಪೊಸಿಟರಿಗೆ ಸ್ವಯಂಚಾಲಿತ ಕ್ಲೌಡ್ ಪರಿಶೀಲನೆ ಸಕ್ರಿಯವಾಗುವುದಿಲ್ಲ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
pull request ರಚಿಸುವ ಮೊದಲು ಸ್ಥಳೀಯ ಬದಲಾವಣೆಗಳನ್ನು ಪರಿಶೀಲಿಸಬಹುದೇ?
ಹೌದು. ಸ್ಥಳೀಯ ಬದಲಾವಣೆಗಳನ್ನು ಪರಿಶೀಲಿಸಲು ನೀವು Codex ಅನ್ನು ಕೇಳಬಹುದು. ಸ್ಥಳೀಯ ಪರಿಶೀಲನೆಯ ಆಯ್ಕೆಗಳಿಗಾಗಿ ಕೋಡ್ ಪರಿಶೀಲನೆಯ ಮಾರ್ಗದರ್ಶಿ ನೋಡಿ.
ಇದು ನನ್ನ ಅಸ್ತಿತ್ವದಲ್ಲಿರುವ ಕ್ಲೌಡ್ ಪರಿಶೀಲನೆಗಳನ್ನು ಹೊಸ ಕ್ಲೌಡ್ ಪರಿಸರಗಳಿಗೆ ಸ್ಥಳಾಂತರಿಸುತ್ತದೆಯೇ?
ಇಲ್ಲ. ಈ ನವೀಕರಣವು ಅಸ್ತಿತ್ವದಲ್ಲಿರುವ ಕ್ಲೌಡ್ ಕೋಡ್ ಪರಿಶೀಲನೆಯನ್ನು ಹೊಸ ಕ್ಲೌಡ್ ಪರಿಸರಗಳಿಗೆ ಸ್ಥಳಾಂತರಿಸುವುದಿಲ್ಲ.
