ಅವಲೋಕನ
ChatGPT ಯಲ್ಲಿನ ತಂಡವು ನಿಮ್ಮ ವರ್ಕ್ಸ್ಪೇಸ್ನಲ್ಲಿ ಒಂದೇ ಯೋಜನೆಗಳಲ್ಲಿ ಕೆಲಸ ಮಾಡುವ ಜನರನ್ನು ಒಟ್ಟುಗೂಡಿಸುತ್ತದೆ. ನಿಮ್ಮ ಸಹೋದ್ಯೋಗಿಗಳನ್ನು ಒಮ್ಮೆ ಸೇರಿಸಿ. ನಂತರ ಪ್ರತಿಯೊಬ್ಬರೊಂದಿಗೂ ಪ್ರತ್ಯೇಕವಾಗಿ ಹಂಚಿಕೊಳ್ಳುವ ಬದಲು, ಪುಟ ಅಥವಾ ಸಂಪೂರ್ಣ ChatGPT ಸ್ಪೇಸ್ ಅನ್ನು ತಂಡದೊಂದಿಗೆ ಹಂಚಿಕೊಳ್ಳಿ.
ಯಾರು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ತಂಡವು ನಿರ್ಧರಿಸುತ್ತದೆ. ಅವರು ಹಂಚಿಕೊಳ್ಳುವ ವಿಷಯ ಮತ್ತು ಸಂದರ್ಭದ ಮಾಹಿತಿಯನ್ನು ChatGPT ಸ್ಪೇಸ್ ಒಳಗೊಂಡಿರುತ್ತದೆ. ನೀವು ತಂಡದೊಂದಿಗೆ ಹಲವು ChatGPT ಸ್ಪೇಸ್ಗಳನ್ನು ಹಂಚಿಕೊಳ್ಳಬಹುದು. ಹಾಗೆಯೇ ಒಂದು ChatGPT ಸ್ಪೇಸ್ ಹಲವು ತಂಡಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, ನೀವು ಹೀಗೆ ಮಾಡಬಹುದು:
ಉತ್ಪನ್ನ, ಎಂಜಿನಿಯರಿಂಗ್, ವಿನ್ಯಾಸ, ಕಾರ್ಯಾಚರಣೆ ಮತ್ತು ಮಾರುಕಟ್ಟೆ ವಿಭಾಗಗಳನ್ನು ಒಳಗೊಂಡ ಬಿಡುಗಡೆ ತಂಡವನ್ನು ರಚಿಸಿ, ನಂತರ ಬಿಡುಗಡೆಯ ChatGPT ಸ್ಪೇಸ್ ಮತ್ತು ಸಂಬಂಧಿತ ಪುಟಗಳನ್ನು ಹಂಚಿಕೊಳ್ಳಿ.
ಮಾರಾಟ, ಪರಿಹಾರ ಎಂಜಿನಿಯರಿಂಗ್ ಮತ್ತು ಗ್ರಾಹಕ ಯಶಸ್ಸು ವಿಭಾಗಗಳನ್ನು ಗ್ರಾಹಕ ಖಾತೆಯ ತಂಡದಲ್ಲಿ ಒಟ್ಟುಗೂಡಿಸಿ, ಖಾತೆಯ ಯೋಜನೆಗಳು ಮತ್ತು ಜವಾಬ್ದಾರಿ ಹಸ್ತಾಂತರಕ್ಕೆ ಬೇಕಾದ ಸಾಮಗ್ರಿಗಳನ್ನು ಹಂಚಿಕೊಳ್ಳಿ.
ವಿವಿಧ ಯೋಜನೆಗಳ ನಡುವೆ ಅಭಿಯಾನದ ಸಂಕ್ಷಿಪ್ತ ವಿವರಗಳು, ಸಂಶೋಧನೆ ಮತ್ತು ಯೋಜನೆ ರೂಪಿಸುವ ChatGPT ಸ್ಪೇಸ್ಗಳನ್ನು ಹಂಚಿಕೊಳ್ಳಲು ಕಾಯಂ ಮಾರುಕಟ್ಟೆ ಅಥವಾ ಕಾರ್ಯಾಚರಣೆ ತಂಡವನ್ನು ಬಳಸಿ.
ಯೋಜನೆಯ ಸಾಪ್ತಾಹಿಕ ಸ್ಥಿತಿವರದಿ ಅಥವಾ ಗ್ರಾಹಕರಿಗೆ ಸಂಬಂಧಿಸಿದ ಬದಲಾವಣೆಗಳ ಸಾರಾಂಶದಂತಹ ಪುನರಾವರ್ತಿತ ಕೆಲಸಕ್ಕೂ ನೀವು ತಂಡದ ಕಾರ್ಯಗಳನ್ನು ರಚಿಸಬಹುದು. ಅಧಿಕಾರ ಹೊಂದಿರುವ ತಂಡದ ಸದಸ್ಯರು ಒಟ್ಟಾಗಿ ಫಲಿತಾಂಶಗಳನ್ನು ಪರಿಶೀಲಿಸಬಹುದು, ಸೂಚನೆಗಳನ್ನು ನವೀಕರಿಸಬಹುದು ಮತ್ತು ಕಾರ್ಯವನ್ನು ನಿರ್ವಹಿಸಬಹುದು.
ಲಭ್ಯತೆ
ChatGPT Business ಮತ್ತು ಎಂಟರ್ಪ್ರೈಸ್ ವರ್ಕ್ಸ್ಪೇಸ್ಗಳಲ್ಲಿ ತಂಡಗಳು ಲಭ್ಯವಿವೆ. ನೀವು ಮತ್ತು ನಿಮ್ಮ ಸಹೋದ್ಯೋಗಿಗಳು ಸದಸ್ಯರಾಗಿರುವ ವರ್ಕ್ಸ್ಪೇಸ್ನಲ್ಲಿ ತಂಡವನ್ನು ಬಳಸಿ. ನಿಮಗೆ ಲಭ್ಯವಿರುವ ಸಾಮರ್ಥ್ಯಗಳನ್ನು ನಿಮ್ಮ ವರ್ಕ್ಸ್ಪೇಸ್ನ ಸೆಟ್ಟಿಂಗ್ಗಳು ಮತ್ತು ಅನುಮತಿಗಳು ನಿರ್ಧರಿಸುತ್ತವೆ.
ತಂಡದಲ್ಲಿ ಏನು ಹಂಚಿಕೆಯಾಗುತ್ತದೆ ಎಂಬುದನ್ನು ತಿಳಿಯಿರಿ
ಹಂಚಿಕೊಂಡ ಪುಟಗಳು, ChatGPT ಸ್ಪೇಸ್ಗಳು, ಕಾರ್ಯಗಳು ಮತ್ತು ಬೆಂಬಲಿತ ಇತರ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ನಿಮ್ಮ ತಂಡವನ್ನು ಬಳಸಿ.
ChatGPT ಸ್ಪೇಸ್ಗಳು ಮತ್ತು ಸೂಚನೆಗಳು
ಸಹೋದ್ಯೋಗಿಗಳು ಒಂದೇ ಕೆಲಸದಲ್ಲಿ ಸಹಕರಿಸಲು ನಿಮ್ಮ ತಂಡದೊಂದಿಗೆ ಪುಟ ಅಥವಾ ChatGPT ಸ್ಪೇಸ್ ಹಂಚಿಕೊಳ್ಳಿ. ಒಂದು ತಂಡವು ಹಲವು ChatGPT ಸ್ಪೇಸ್ಗಳಿಗೆ ಪ್ರವೇಶ ಹೊಂದಿರಬಹುದು. ಹಾಗೆಯೇ ಒಂದು ChatGPT ಸ್ಪೇಸ್ ಹಲವು ತಂಡಗಳನ್ನು ಒಳಗೊಂಡಿರಬಹುದು. ಸದಸ್ಯರು ವಿಷಯವನ್ನು ವೀಕ್ಷಿಸಬಹುದೇ ಅಥವಾ ಸಂಪಾದಿಸಬಹುದೇ ಎಂಬುದು ಹಂಚಿಕೆ ಅನುಮತಿಗಳು ಮತ್ತು ಅವರು ಹೊಂದಿರುವ ಇತರ ಪ್ರವೇಶಾಧಿಕಾರಗಳನ್ನು ಅವಲಂಬಿಸಿರುತ್ತದೆ.
ತಂಡದ ಕಾರ್ಯವನ್ನು ರಚಿಸುವಾಗ ಅದಕ್ಕೆ ಅಗತ್ಯವಾದ ಸೂಚನೆಗಳು ಮತ್ತು ಮೂಲ ಉಲ್ಲೇಖಗಳನ್ನು ಒದಗಿಸಿ. ತಂಡದೊಂದಿಗೆ ChatGPT ಸ್ಪೇಸ್ ಹಂಚಿಕೊಂಡ ಮಾತ್ರಕ್ಕೆ ಅದರ ಎಲ್ಲ ವಿಷಯವೂ ಸ್ವಯಂಚಾಲಿತವಾಗಿ ಪ್ರತಿಯೊಂದು ಕಾರ್ಯದ ಭಾಗವಾಗುವುದಿಲ್ಲ.
ಪ್ಲಗಿನ್ಗಳು ಮತ್ತು ಸಂಪರ್ಕಗಳು
ತಂಡದೊಂದಿಗೆ ಹಂಚಿಕೊಂಡ ಪ್ಲಗಿನ್ ಅನ್ನು ಅದರ ಸದಸ್ಯರು ಹಾಗೂ ಅದರ ಕಾರ್ಯಗಳು ಬಳಸಬಹುದು. ಪ್ಲಗಿನ್ ಪರಿಕರಗಳು ಅಥವಾ ಕೌಶಲ್ಯಗಳನ್ನು ಒದಗಿಸುತ್ತದೆ. ಅಗತ್ಯವಿರುವ ಅಪ್ಲಿಕೇಶನ್ ಪ್ರವೇಶಾಧಿಕಾರವು ಬಳಸುವ ಸಂಪರ್ಕವನ್ನು ಅವಲಂಬಿಸಿರುತ್ತದೆ.
ಪ್ಲಗಿನ್ ಹಂಚಿಕೊಳ್ಳುವುದರಿಂದ ನಿಮ್ಮ ವೈಯಕ್ತಿಕ ಅಪ್ಲಿಕೇಶನ್ ಸಂಪರ್ಕ ಹಂಚಿಕೆಯಾಗುವುದಿಲ್ಲ. ತಂಡದ ಕಾರ್ಯಗಳು ತಂಡಕ್ಕಾಗಿ ಸಂರಚಿಸಿದ ಸಂಪರ್ಕಗಳನ್ನು ಬಳಸುತ್ತವೆ. ಅವು ಯಾವ ಮಾಹಿತಿ ಮತ್ತು ಕ್ರಮಗಳಿಗೆ ಪ್ರವೇಶ ಹೊಂದಿರುತ್ತವೆ ಎಂಬುದನ್ನು ಸಂಪರ್ಕಿತ ಸೇವಾದಾತರ ಖಾತೆ ನಿರ್ಧರಿಸುತ್ತದೆ. ಕಾರ್ಯವು ಸಕ್ರಿಯಗೊಳಿಸಿದ ವರ್ಕ್ಸ್ಪೇಸ್ ಸಂಪರ್ಕವನ್ನು ಬಳಸಲು, ತಂಡದ ಪ್ರತಿಯೊಬ್ಬ ಸದಸ್ಯರೂ ಅದೇ ಸೇವಾದಾತರ ಖಾತೆಯನ್ನು ಸಂಪರ್ಕಿಸಬೇಕಾಗಿಲ್ಲ.
ಪ್ಲಗಿನ್ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ChatGPT ಮತ್ತು Codex ನಲ್ಲಿ ಪ್ಲಗಿನ್ಗಳು ನೋಡಿ.
ಕಾರ್ಯಗಳು ಮತ್ತು ಫಲಿತಾಂಶಗಳು
ವರ್ಕ್ಸ್ಪೇಸ್ ಅನುಮತಿಗಳು ಅವಕಾಶ ನೀಡಿದರೆ, ತಂಡದ ಸದಸ್ಯರು ಕಾರ್ಯಗಳನ್ನು ನಿರ್ವಹಿಸಬಹುದು ಮತ್ತು ಅವರು ಸೇರುವ ಮೊದಲು ಪೂರ್ಣಗೊಂಡವುಗಳೂ ಸೇರಿದಂತೆ ಲಭ್ಯವಿರುವ ಕಾರ್ಯನಿರ್ವಹಣೆಯ ದಾಖಲೆಗಳನ್ನು ಪರಿಶೀಲಿಸಬಹುದು. ಕಾರ್ಯಗಳು ತಮಗಾಗಿ ಉಳಿಸಲಾದ ಸೂಚನೆಗಳನ್ನು ಮತ್ತು ತಂಡಕ್ಕಾಗಿ ಸಂರಚಿಸಲಾದ ಸಂಪರ್ಕಗಳನ್ನು ಬಳಸುತ್ತವೆ. ಅವುಗಳನ್ನು ರಚಿಸಿದವರ ವೈಯಕ್ತಿಕವಾಗಿ ಉಳಿಸಿದ ನೆನಪುಗಳು, ಕಸ್ಟಮ್ ಸೂಚನೆಗಳು ಅಥವಾ ಸಂಭಾಷಣೆಯ ಇತಿಹಾಸವು ಅವುಗಳಿಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುವುದಿಲ್ಲ.
ತಂಡಗಳು, ವರ್ಕ್ಸ್ಪೇಸ್ಗಳು ಮತ್ತು ಗುಂಪುಗಳು
ನಿಮ್ಮ ವರ್ಕ್ಸ್ಪೇಸ್ ನಿಮ್ಮ ಸಂಸ್ಥೆಯ ಸದಸ್ಯರು, ಸೆಟ್ಟಿಂಗ್ಗಳು ಮತ್ತು ಆಡಳಿತ ನಿಯಂತ್ರಣಗಳನ್ನು ಒಳಗೊಂಡಿರುತ್ತದೆ. ತಂಡವು ಹಂಚಿಕೊಂಡ ಕೆಲಸಕ್ಕಾಗಿ ಆ ವರ್ಕ್ಸ್ಪೇಸ್ನ ಜನರನ್ನು ಒಟ್ಟುಗೂಡಿಸುತ್ತದೆ. ತಂಡವನ್ನು ರಚಿಸುವುದರಿಂದ ಅಥವಾ ತಂಡಕ್ಕೆ ಸೇರುವುದರಿಂದ ನೀವು ವರ್ಕ್ಸ್ಪೇಸ್ ನಿರ್ವಾಹಕರಾಗುವುದಿಲ್ಲ.
ವರ್ಕ್ಸ್ಪೇಸ್ ಗುಂಪುಗಳು ಸದಸ್ಯರನ್ನು ಸಂಘಟಿಸಲು, ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ವೈಶಿಷ್ಟ್ಯಗಳ ಪ್ರವೇಶಕ್ಕಾಗಿ ಕಸ್ಟಮ್ ಪಾತ್ರಗಳನ್ನು ನಿಯೋಜಿಸಲು ನಿರ್ವಾಹಕರಿಗೆ ನೆರವಾಗುತ್ತವೆ. ಗುಂಪುಗಳನ್ನು ಕೈಯಾರೆ ನಿರ್ವಹಿಸಬಹುದು ಅಥವಾ ಗುರುತಿನ ಸೇವಾದಾತರಿಂದ ಸಿಂಕ್ ಮಾಡಬಹುದು. ಪುಟಗಳು, ChatGPT ಸ್ಪೇಸ್ಗಳು ಮತ್ತು ಕಾರ್ಯಗಳಲ್ಲಿ ಸಹಕರಿಸಲು ತಂಡವು ಸಹೋದ್ಯೋಗಿಗಳಿಗೆ ಒಟ್ಟಾಗಿ ಸದಸ್ಯತ್ವ ನೀಡುತ್ತದೆ. ತಂಡದ ಸದಸ್ಯತ್ವ, ವಿಷಯ ಹಂಚಿಕೆ ಮತ್ತು ಪರಿಕರಗಳ ಅನುಮತಿಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ.
ಉದಾಹರಣೆಗೆ, ನಿರ್ವಾಹಕರು ಒಂದು ವಿಭಾಗಕ್ಕೆ ವೈಶಿಷ್ಟ್ಯದ ಪ್ರವೇಶಾಧಿಕಾರ ನೀಡಲು ಗುಂಪನ್ನು ಬಳಸಬಹುದು. ನಂತರ ಸಹೋದ್ಯೋಗಿಗಳು ಯೋಜನೆಯ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ನಿಯಮಿತ ಸ್ಥಿತಿವರದಿಯನ್ನು ನಿರ್ವಹಿಸಲು ತಂಡವನ್ನು ರಚಿಸಬಹುದು.
ತಂಡದ ಸದಸ್ಯತ್ವ ಇದ್ದರೂ ವರ್ಕ್ಸ್ಪೇಸ್ ಅನುಮತಿಗಳ ಮಿತಿಗಳು ಅನ್ವಯಿಸುತ್ತವೆ. ಗುಂಪಿನ ಆಡಳಿತಕ್ಕಾಗಿ, ಗುಂಪುಗಳು ಮತ್ತು ಗುಂಪಿನ ನಿರ್ವಾಹಕರನ್ನು ನಿರ್ವಹಿಸುವುದು ನೋಡಿ.
ತಂಡವನ್ನು ರಚಿಸಿ
ತಂಡದ ಸದಸ್ಯರು ಮತ್ತು ಹಂಚಿಕೊಂಡ ಕೆಲಸ ಇರುವ ವರ್ಕ್ಸ್ಪೇಸ್ನಲ್ಲಿ ತಂಡವನ್ನು ರಚಿಸಿ. ತಂಡಗಳನ್ನು ರಚಿಸಲು ನಿಮಗೆ ಅನುಮತಿ ಇಲ್ಲದಿದ್ದರೆ, ಪ್ರವೇಶಾಧಿಕಾರದ ಕುರಿತು ನಿಮ್ಮ ವರ್ಕ್ಸ್ಪೇಸ್ ನಿರ್ವಾಹಕರನ್ನು ಕೇಳಿ.
ತಂಡಗಳು ಪಟ್ಟಿಯನ್ನು ತೆರೆಯಿರಿ.
ತಂಡವನ್ನು ರಚಿಸಿ ಆಯ್ಕೆಮಾಡಿ.
ಹೆಸರು ನಮೂದಿಸಿ ಮತ್ತು ಐಚ್ಛಿಕವಾಗಿ ವಿವರಣೆ ಸೇರಿಸಿ.
ಪೂರ್ಣಗೊಳಿಸಲು ತಂಡವನ್ನು ರಚಿಸಿ ಆಯ್ಕೆಮಾಡಿ.
ನೀವು ತಂಡದ ಮಾಲೀಕರಾಗುತ್ತೀರಿ. ತಂಡವು ತನ್ನ ಸಂರಚಿಸಿದ ಸಂಪರ್ಕಗಳನ್ನು ಬಳಸಿ ಕ್ಲೌಡ್ನಲ್ಲಿ ಕಾರ್ಯಗಳನ್ನು ನಡೆಸಲು ತನ್ನದೇ ಆದ ಸೇವಾ ಖಾತೆಯನ್ನು ಹೊಂದಿರುತ್ತದೆ.
ಸದಸ್ಯರನ್ನು ಸೇರಿಸಿ ಅಥವಾ ತಂಡಕ್ಕೆ ಸೇರಿ
ತಂಡದ ಸದಸ್ಯರು ಅದೇ ವರ್ಕ್ಸ್ಪೇಸ್ನ ಸಹೋದ್ಯೋಗಿಗಳನ್ನು ಆಹ್ವಾನಿಸಬಹುದು.
ತಂಡವನ್ನು ತೆರೆಯಿರಿ ಮತ್ತು ಆಹ್ವಾನಿಸಿ ಆಯ್ಕೆಮಾಡಿ.
ಹೆಸರು ಅಥವಾ ಇಮೇಲ್ ಮೂಲಕ ಹುಡುಕಿ, ಸೇರಿಸಬೇಕಾದ ಸಹೋದ್ಯೋಗಿಗಳನ್ನು ಆಯ್ಕೆಮಾಡಿ.
ಸದಸ್ಯರನ್ನು ಸೇರಿಸಿ ಅಥವಾ ಹಲವು ಸದಸ್ಯರನ್ನು ಸೇರಿಸಿ ಆಯ್ಕೆಮಾಡಿ.
ತಂಡಕ್ಕೆ ಸೇರುವ ಲಿಂಕ್ ಹಂಚಿಕೊಳ್ಳಲು, ಆಹ್ವಾನಿಸಿ ಆಯ್ಕೆಯಲ್ಲಿನ ಆಯ್ಕೆಗಳನ್ನು ತೆರೆಯಿರಿ ಮತ್ತು ಲಿಂಕ್ ನಕಲಿಸಿ ಆಯ್ಕೆಮಾಡಿ. ಅದೇ ವರ್ಕ್ಸ್ಪೇಸ್ನ ಇತರ ಸದಸ್ಯರು ಲಿಂಕ್ ತೆರೆಯುವ ಮೂಲಕ ಸೇರಬಹುದು. ಸೇರಲು ತಂಡದ ಮಾಲೀಕರಿಂದ ಪ್ರತ್ಯೇಕ ಅನುಮೋದನೆ ಅಗತ್ಯವಿಲ್ಲ. ತಂಡಕ್ಕೆ ಸೇರುವ ಮೊದಲು ಅದರ ಲಿಂಕ್ ತೆರೆಯುವ ವರ್ಕ್ಸ್ಪೇಸ್ ಸದಸ್ಯರಿಗೆ ತಂಡದ ಹೆಸರು ಮತ್ತು ಸದಸ್ಯರ ಪಟ್ಟಿ ಕಾಣಿಸಬಹುದು.
ಸಹೋದ್ಯೋಗಿಗಳನ್ನು ಆಹ್ವಾನಿಸುವ ಅಥವಾ ಸೇರುವ ಲಿಂಕ್ ಹಂಚಿಕೊಳ್ಳುವ ಮೊದಲು, ತಂಡದ ಅಸ್ತಿತ್ವದಲ್ಲಿರುವ ಕಾರ್ಯಗಳು, ಕಾರ್ಯನಿರ್ವಹಣೆಯ ಇತಿಹಾಸ ಮತ್ತು ಸಂರಚಿಸಿದ ಸಂಪರ್ಕಗಳನ್ನು ಪರಿಶೀಲಿಸಿ. ಪುಟಗಳು ಮತ್ತು ChatGPT ಸ್ಪೇಸ್ಗಳನ್ನು ತಂಡದೊಂದಿಗೆ ಪ್ರತ್ಯೇಕವಾಗಿ ಹಂಚಿಕೊಳ್ಳಿ. ಪ್ರತಿ ಸಂಪನ್ಮೂಲದ ಹಂಚಿಕೆ ಅನುಮತಿಗಳನ್ನು ಪರಿಶೀಲಿಸಿ.
ವರ್ಕ್ಸ್ಪೇಸ್ RBAC ಮತ್ತು ತಂಡದ ಅನುಮತಿಗಳು
ಎಂಟರ್ಪ್ರೈಸ್ ವರ್ಕ್ಸ್ಪೇಸ್ಗಳಲ್ಲಿ, ರೋಲ್-ಬೇಸ್ಡ್ ಆಕ್ಸೆಸ್ ಕಂಟ್ರೋಲ್ (RBAC) ಮೂಲಕ ನಿರ್ವಾಹಕರು ಯಾರು ತಂಡಗಳನ್ನು ರಚಿಸಬಹುದು ಮತ್ತು ಯಾರು ತಂಡದ ಕಾರ್ಯಗಳನ್ನು ರಚಿಸಬಹುದು ಅಥವಾ ನವೀಕರಿಸಬಹುದು ಎಂಬುದನ್ನು ನಿಯಂತ್ರಿಸಬಹುದು. ವೈಶಿಷ್ಟ್ಯಗಳ ಅನುಮತಿಗಳು, ತಂಡದ ಸದಸ್ಯತ್ವ ಮತ್ತು ಸಂಪರ್ಕಗಳ ಪ್ರವೇಶಾಧಿಕಾರವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ.
ತಂಡಗಳನ್ನು ರಚಿಸುವ ಅನುಮತಿ ಇದ್ದ ಮಾತ್ರಕ್ಕೆ ನಿಮ್ಮನ್ನು ತಂಡಕ್ಕೆ ಸೇರಿಸಲಾಗುವುದಿಲ್ಲ ಅಥವಾ ಪ್ರತಿಯೊಂದು ತಂಡಕ್ಕೂ ಪ್ರವೇಶ ಸಿಗುವುದಿಲ್ಲ. ತಂಡದಲ್ಲಿ ನೀವು ಏನು ಮಾಡಬಹುದು ಎಂಬುದು ನಿಮ್ಮ ಸದಸ್ಯತ್ವ ಮತ್ತು ತಂಡದಲ್ಲಿನ ಪಾತ್ರವನ್ನೂ ಅವಲಂಬಿಸಿರುತ್ತದೆ.
ವರ್ಕ್ಸ್ಪೇಸ್ ಮಾಲೀಕರು ಪ್ರತ್ಯೇಕ ವರ್ಕ್ಸ್ಪೇಸ್ ಸದಸ್ಯರಿಗೆ ಅಥವಾ ವರ್ಕ್ಸ್ಪೇಸ್ ಗುಂಪುಗಳಿಗೆ ಕಸ್ಟಮ್ ಪಾತ್ರಗಳನ್ನು ನಿಯೋಜಿಸಬಹುದು. ಹೊಂದಿಸುವ ವಿಧಾನಕ್ಕಾಗಿ, ಪಾತ್ರ ಆಧಾರಿತ ಪ್ರವೇಶ ನಿಯಂತ್ರಣದ ಮೂಲಕ ವೈಶಿಷ್ಟ್ಯಗಳ ಪ್ರವೇಶಾಧಿಕಾರವನ್ನು ನಿರ್ವಹಿಸುವುದು ನೋಡಿ.
ಸದಸ್ಯರು ಮತ್ತು ಮಾಲೀಕರ ಪ್ರವೇಶಾಧಿಕಾರವನ್ನು ತಿಳಿಯಿರಿ
ತಂಡದ ಸದಸ್ಯರು ಸಹೋದ್ಯೋಗಿಗಳನ್ನು ಆಹ್ವಾನಿಸಬಹುದು ಮತ್ತು ಮಾಲೀಕರನ್ನು ಹೊರತುಪಡಿಸಿ ಇತರ ಸದಸ್ಯರನ್ನು ತೆಗೆದುಹಾಕಬಹುದು. ಪ್ರತಿ ಕ್ರಮಕ್ಕೆ ಇರುವ ಅನುಮತಿಗಳ ಪ್ರಕಾರ ಸದಸ್ಯರು ತಂಡದ ಕಾರ್ಯಗಳನ್ನೂ ನಿರ್ವಹಿಸಬಹುದು.
ತಂಡದ ಮಾಲೀಕರು ಮಾತ್ರ ತಂಡವನ್ನು ಅಳಿಸಬಹುದು. ವರ್ಕ್ಸ್ಪೇಸ್ ನಿರ್ವಾಹಕರು ವರ್ಕ್ಸ್ಪೇಸ್ ಸಂಪರ್ಕಗಳನ್ನು ನಿರ್ವಹಿಸುತ್ತಾರೆ ಮತ್ತು ಅವುಗಳನ್ನು ಯಾರು ಬಳಸಬಹುದು ಎಂಬುದನ್ನು ನಿರ್ಧರಿಸುತ್ತಾರೆ. ಅರ್ಹ ವರ್ಕ್ಸ್ಪೇಸ್ ಸಂಪರ್ಕಗಳಲ್ಲಿ ಯಾವುವನ್ನು ತಂಡಕ್ಕೆ ಸಕ್ರಿಯಗೊಳಿಸಬೇಕು ಎಂಬುದನ್ನು ತಂಡದ ಮಾಲೀಕರು ಆಯ್ಕೆಮಾಡುತ್ತಾರೆ. ತಂಡದ ಮಾಲೀಕರಾದ ಮಾತ್ರಕ್ಕೆ ವರ್ಕ್ಸ್ಪೇಸ್ ನಿರ್ವಾಹಕರ ಅನುಮತಿಗಳು ಸಿಗುವುದಿಲ್ಲ.
ಸದಸ್ಯರಾಗಿ ತಂಡದಿಂದ ಹೊರಬರಲು, ಸದಸ್ಯರು ತೆರೆಯಿರಿ ಮತ್ತು ತಂಡದಿಂದ ಹೊರಬನ್ನಿ ಆಯ್ಕೆಮಾಡಿ. ಹೊರಬಂದಾಗ ಆ ತಂಡದ ಮೂಲಕ ನೀಡಲಾದ ಪ್ರವೇಶಾಧಿಕಾರವನ್ನು ತೆಗೆದುಹಾಕಲಾಗುತ್ತದೆ. ಹಂಚಿಕೊಂಡ ಸಂಪನ್ಮೂಲಕ್ಕೆ ನೀವು ಹೊಂದಿರುವ ಪ್ರತ್ಯೇಕ ಪ್ರವೇಶಾಧಿಕಾರವು ಮುಂದುವರಿಯುತ್ತದೆ. ಸದಸ್ಯರನ್ನು ತೆಗೆದುಹಾಕುವ ಸಾಮಾನ್ಯ ಪ್ರಕ್ರಿಯೆಯ ಮೂಲಕ ತಂಡದ ಮಾಲೀಕರನ್ನು ತೆಗೆದುಹಾಕಲು ಸಾಧ್ಯವಿಲ್ಲ.
ತಂಡದ ಕಾರ್ಯವನ್ನು ಬಳಸಿ
ಉದಾಹರಣೆಗೆ, ಯೋಜನಾ ತಂಡವು ಅನುಮೋದಿತ ಮೂಲಗಳಿಂದ ಪ್ರಗತಿ, ಅಡೆತಡೆಗಳು ಮತ್ತು ಮುಂದಿನ ಕ್ರಮಗಳ ಮಾಹಿತಿ ಸಂಗ್ರಹಿಸಿ, ನಂತರ ಹಂಚಿಕೊಂಡ ಸ್ಲ್ಯಾಕ್ ಚಾನೆಲ್ನಲ್ಲಿ ಇತ್ತೀಚಿನ ಸ್ಥಿತಿಯನ್ನು ಪ್ರಕಟಿಸುವ ಸಾಪ್ತಾಹಿಕ ಕಾರ್ಯವನ್ನು ಹೊಂದಿಸಬಹುದು. ತಂಡದ ಸದಸ್ಯರು ಫಲಿತಾಂಶವನ್ನು ಪರಿಶೀಲಿಸಿ, ಉಳಿಸಿದ ಸೂಚನೆಗಳನ್ನು ಪರಿಷ್ಕರಿಸಬಹುದು. ಕಾರ್ಯಕ್ಕೆ ಅದರ ಮೂಲಗಳನ್ನು ಪ್ರವೇಶಿಸುವ ಅಧಿಕಾರ ಮತ್ತು ಆ ಚಾನೆಲ್ನಲ್ಲಿ ಪ್ರಕಟಿಸುವ ಅನುಮತಿ ಬೇಕಾಗುತ್ತದೆ.
ಕಾರ್ಯಗಳು ಕ್ಲೌಡ್ನಲ್ಲಿ ನಡೆಯುವುದರಿಂದ, ಅವುಗಳನ್ನು ರಚಿಸಿದವರು ChatGPT ಅನ್ನು ತೆರೆದಿಡಬೇಕಾಗಿಲ್ಲ.
ಸಂಪರ್ಕ ಹೊಂದಿಸುವಿಕೆ, ಪ್ರಚೋದಕಗಳು, ಕಾರ್ಯನಿರ್ವಹಣೆಯ ಇತಿಹಾಸ ಮತ್ತು ದೋಷನಿವಾರಣೆಗಾಗಿ, ChatGPT ಯಲ್ಲಿ ತಂಡದ ಕಾರ್ಯಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು ನೋಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ತಂಡವು ChatGPT ಸ್ಪೇಸ್ಗಿಂತ ಹೇಗೆ ಭಿನ್ನವಾಗಿದೆ?
ತಂಡವೆಂದರೆ ಕೆಲಸಕ್ಕೆ ಪ್ರವೇಶಾಧಿಕಾರವನ್ನು ಮತ್ತು ಕಾರ್ಯಗಳ ಜವಾಬ್ದಾರಿಯನ್ನು ಹಂಚಿಕೊಳ್ಳುವ ಜನರ ಗುಂಪು. ಅವರು ಒಟ್ಟಾಗಿ ಕೆಲಸ ಮಾಡುವ ವಿಷಯ ಮತ್ತು ಸಂದರ್ಭದ ಮಾಹಿತಿಯನ್ನು ChatGPT ಸ್ಪೇಸ್ ಒಳಗೊಂಡಿರುತ್ತದೆ. ನೀವು ತಂಡದೊಂದಿಗೆ ಹಲವು ChatGPT ಸ್ಪೇಸ್ಗಳನ್ನು ಹಂಚಿಕೊಳ್ಳಬಹುದು. ಹಾಗೆಯೇ ಒಂದು ChatGPT ಸ್ಪೇಸ್ ಹಲವು ತಂಡಗಳನ್ನು ಒಳಗೊಂಡಿರಬಹುದು.
ತಂಡವನ್ನು ಬಳಸಲು ನಾನು ಕಾರ್ಯವನ್ನು ರಚಿಸಬೇಕೇ?
ಇಲ್ಲ. ಅದೇ ಸಹೋದ್ಯೋಗಿಗಳೊಂದಿಗೆ ಪುಟಗಳು, ChatGPT ಸ್ಪೇಸ್ಗಳು ಮತ್ತು ಬೆಂಬಲಿತ ಇತರ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನೀವು ತಂಡವನ್ನು ಬಳಸಬಹುದು. ನಿಗದಿತ ವೇಳಾಪಟ್ಟಿಯಂತೆ ಅಥವಾ ಬೆಂಬಲಿತ ಪ್ರಚೋದಕಕ್ಕೆ ಪ್ರತಿಕ್ರಿಯೆಯಾಗಿ ChatGPT ಒಂದು ಕೆಲಸವನ್ನು ಪುನರಾವರ್ತಿಸಬೇಕೆಂದಾಗ ತಂಡದ ಕಾರ್ಯವನ್ನು ರಚಿಸಿ.
ಇದು ಮೈಕ್ರೋಸಾಫ್ಟ್ ಟೀಮ್ಸ್ ಅಥವಾ ಪ್ರತ್ಯೇಕ ChatGPT ಯೋಜನೆಯೇ?
ಇಲ್ಲ. ChatGPT ಯಲ್ಲಿನ ತಂಡಗಳು ನಿಮ್ಮ ಈಗಿನ ChatGPT ವರ್ಕ್ಸ್ಪೇಸ್ನಲ್ಲೇ ಜನರನ್ನು ಮತ್ತು ಹಂಚಿಕೊಂಡ ಕೆಲಸವನ್ನು ಸಂಘಟಿಸಲು ನೆರವಾಗುತ್ತವೆ. ಮೈಕ್ರೋಸಾಫ್ಟ್ ಟೀಮ್ಸ್ ಎಂಬುದು ಮೈಕ್ರೋಸಾಫ್ಟ್ನ ಪ್ರತ್ಯೇಕ ಅಪ್ಲಿಕೇಶನ್.
ತಂಡಕ್ಕೆ ಸೇರಿದರೆ ನನ್ನ ವೈಯಕ್ತಿಕ ಸಂಭಾಷಣೆಗಳು ಅಥವಾ ಅಪ್ಲಿಕೇಶನ್ ಖಾತೆಗಳು ಹಂಚಿಕೆಯಾಗುತ್ತವೆಯೇ?
ತಂಡಕ್ಕೆ ಸೇರುವುದರಿಂದ ನಿಮ್ಮ ವೈಯಕ್ತಿಕ ಸಂಭಾಷಣೆಗಳು ಅಥವಾ ಅಪ್ಲಿಕೇಶನ್ ಸಂಪರ್ಕಗಳು ಸ್ವಯಂಚಾಲಿತವಾಗಿ ಹಂಚಿಕೆಯಾಗುವುದಿಲ್ಲ. ತಂಡದೊಂದಿಗೆ ಹಂಚಿಕೊಂಡ ಸಂಪನ್ಮೂಲಗಳನ್ನು ಮತ್ತು ಅದರ ಕಾರ್ಯಗಳಿಗಾಗಿ ಸಂರಚಿಸಿದ ಸಂಪರ್ಕಗಳನ್ನು ಪರಿಶೀಲಿಸಿ. ಪ್ಲಗಿನ್ ಹಂಚಿಕೊಳ್ಳುವುದು ಮತ್ತು ಸಂಪರ್ಕಿತ ಖಾತೆಗೆ ಪ್ರವೇಶಾಧಿಕಾರ ನೀಡುವುದು ಪ್ರತ್ಯೇಕ ಕ್ರಮಗಳು.
ನಾನು ಇನ್ನೊಂದು ವರ್ಕ್ಸ್ಪೇಸ್ನ ವ್ಯಕ್ತಿಯನ್ನು ಸೇರಿಸಬಹುದೇ?
ತಂಡಗಳು ಒಂದೇ ವರ್ಕ್ಸ್ಪೇಸ್ನ ಸದಸ್ಯರನ್ನು ಒಟ್ಟುಗೂಡಿಸುತ್ತವೆ. ತಂಡಕ್ಕೆ ಸೇರುವ ಲಿಂಕ್ ವರ್ಕ್ಸ್ಪೇಸ್ಗೆ ಸೇರುವ ಆಹ್ವಾನವಲ್ಲ.
ತಂಡದ ಸದಸ್ಯತ್ವವು ವರ್ಕ್ಸ್ಪೇಸ್ ಗುಂಪುಗಳು ಅಥವಾ ಸ್ಲ್ಯಾಕ್ ಅಥವಾ ಮೈಕ್ರೋಸಾಫ್ಟ್ ಟೀಮ್ಸ್ ಚಾನೆಲ್ಗಳೊಂದಿಗೆ ಸಿಂಕ್ ಆಗುತ್ತದೆಯೇ?
ಇಲ್ಲ. ಪ್ರಸ್ತುತ ಆ ಗುಂಪುಗಳು ಅಥವಾ ಚಾನೆಲ್ಗಳಿಂದ ತಂಡದ ಸದಸ್ಯತ್ವವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ನಂತರದ ಸದಸ್ಯತ್ವ ಬದಲಾವಣೆಗಳೂ ಸ್ವಯಂಚಾಲಿತವಾಗಿ ಸಿಂಕ್ ಆಗುವುದಿಲ್ಲ. ತಂಡದ ಸದಸ್ಯರನ್ನು ನೇರವಾಗಿ ChatGPT ಯಲ್ಲೇ ಸೇರಿಸಿ ಅಥವಾ ತೆಗೆದುಹಾಕಿ.
