ಜಾಹೀರಾತು ವ್ಯವಸ್ಥಾಪಕ ಪ್ಲಗಿನ್, ನೀವು ಪ್ರವೇಶಿಸಬಹುದಾದ ಜಾಹೀರಾತು ವ್ಯವಸ್ಥಾಪಕ ಖಾತೆಗಳಿಗೆ ಸಂಪರ್ಕಗೊಳ್ಳುತ್ತದೆ. ಸಹಜ ಭಾಷೆಯಲ್ಲಿ ಸೂಚನೆಗಳನ್ನು ನೀಡಿ ಖಾತೆಯ ರಚನೆಯನ್ನು ತಿಳಿಯಿರಿ, ಜಾಹೀರಾತುಗಳ ಕರಡು ರಚಿಸಿ ಮುನ್ನೋಟ ನೋಡಿ, ದೃಢೀಕರಿಸಿದ ಬದಲಾವಣೆಗಳನ್ನು ಮಾಡಿ, ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಿ, ಜಾಹೀರಾತು ಪ್ರದರ್ಶನದ ಸಮಸ್ಯೆಗಳನ್ನು ನಿವಾರಿಸಿ ಮತ್ತು ಆದ್ಯತೆಯ ಕ್ರಮದಲ್ಲಿ ಶಿಫಾರಸುಗಳನ್ನು ಪಡೆಯಿರಿ.
ನೀವು ಏನೆಲ್ಲ ಮಾಡಬಹುದು
ಜಾಲತಾಣ ಅಥವಾ ಸಂಕ್ಷಿಪ್ತ ವಿವರಣೆಯಿಂದ ಜಾಹೀರಾತುಗಳನ್ನು ರಚಿಸಿ
ಸಾರ್ವಜನಿಕ ಜಾಲತಾಣ ಅಥವಾ ಉತ್ಪನ್ನದ ಪುಟವನ್ನು ಹಂಚಿಕೊಳ್ಳಿ, ಇಲ್ಲವೇ ನೀವು ಏನನ್ನು ಪ್ರಚಾರ ಮಾಡಲು ಬಯಸುತ್ತೀರಿ ಎಂದು ವಿವರಿಸಿ. ಪ್ಲಗಿನ್ ಈ ಕಾರ್ಯಗಳನ್ನು ಮಾಡಬಹುದು:
ನಿಮ್ಮ ಜಾಲತಾಣ ಅಥವಾ ಸಂಕ್ಷಿಪ್ತ ವಿವರಣೆಯ ಆಧಾರದಲ್ಲಿ ಜಾಹೀರಾತಿನ ಶೀರ್ಷಿಕೆ ಮತ್ತು ವಿವರಣೆಯ ಕರಡು ರಚಿಸುವುದು
ನಿಮ್ಮ ಜಾಲತಾಣದಲ್ಲಿ ಸೂಕ್ತ ಚಿತ್ರವನ್ನು ಹುಡುಕುವುದು, ನೀವು ನೀಡಿದ ಚಿತ್ರವನ್ನು ಬಳಸುವುದು, ಅರ್ಹ ಜಾಹೀರಾತು ಸಾಮಗ್ರಿಯನ್ನು ಮರುಬಳಸುವುದು ಅಥವಾ ನೀವು ಸಂಬಂಧಿತ ಆಯ್ಕೆಯನ್ನು ಆರಿಸಿದ ನಂತರ ಹೊಸ ಚಿತ್ರವನ್ನು ರಚಿಸುವುದು
ಒಂದು ಜಾಹೀರಾತನ್ನು ಅಥವಾ ಒಂದೇ ಅನುಮೋದಿತ ಚಿತ್ರ, ಚಿತ್ರದ ಕತ್ತರಿಸಿದ ಭಾಗ ಮತ್ತು ಗಮ್ಯಸ್ಥಾನವನ್ನು ಬಳಸುವ, ಪರಸ್ಪರ ಹೊಂದುವ ಪ್ರಮಾಣಿತ ಜಾಹೀರಾತು ರೂಪಾಂತರಗಳ ಗುಚ್ಛವನ್ನು ರಚಿಸುವುದು
ಏನನ್ನಾದರೂ ಅಪ್ಲೋಡ್ ಮಾಡುವ ಅಥವಾ ಉಳಿಸುವ ಮೊದಲು ನಿಮಗೆ ಮುನ್ನೋಟ ತೋರಿಸುವುದು
ಈಗಿರುವ ಅಭಿಯಾನ ಮತ್ತು ಜಾಹೀರಾತು ಗುಂಪಿಗೆ ಜಾಹೀರಾತನ್ನು ಸೇರಿಸುವುದು ಅಥವಾ ಅಗತ್ಯವಿರುವ ಅಭಿಯಾನ ರಚನೆ ಇಲ್ಲದಿದ್ದರೆ ಅದನ್ನು ರಚಿಸುವುದು
ಅನುಮೋದಿತ ಜಾಹೀರಾತು ಸಾಮಗ್ರಿಯನ್ನು ಅಪ್ಲೋಡ್ ಮಾಡಿ, ನೀವು ದೃಢೀಕರಿಸಿದ ಸ್ಥಿತಿಯೊಂದಿಗೆ ಜಾಹೀರಾತನ್ನು ರಚಿಸುವುದು
ಏನನ್ನಾದರೂ ರಚಿಸುವ ಮೊದಲು, ಪ್ಲಗಿನ್ ಗಮ್ಯ ಪುಟ, ಚಿತ್ರ, ಜಾಹೀರಾತು ಪಠ್ಯ, ಅಭಿಯಾನದ ಸೆಟ್ಟಿಂಗ್ಗಳು, ಬಜೆಟ್, ಗುರಿ ಪ್ರೇಕ್ಷಕರ ಆಯ್ಕೆ ಮತ್ತು ಇತರ ಸಂಬಂಧಿತ ವಿವರಗಳನ್ನು ನಿಮ್ಮ ಅನುಮೋದನೆಗಾಗಿ ತೋರಿಸುತ್ತದೆ.
ಜಾಹೀರಾತು ಸಾಮಗ್ರಿಯ ಕುರಿತು ಮಾರ್ಗದರ್ಶನಕ್ಕಾಗಿ, ChatGPT ಜಾಹೀರಾತುಗಳಿಗಾಗಿ ಜಾಹೀರಾತುಗಳನ್ನು ರಚಿಸಿ ನೋಡಿ.
ಈಗಿರುವ ಉತ್ಪನ್ನ ದತ್ತಾಂಶ ಹರಿವಿನಿಂದ ಜಾಹೀರಾತುಗಳನ್ನು ರಚಿಸಿ
ನಿಮ್ಮ ಖಾತೆಯಲ್ಲಿ ಅರ್ಹ ಉತ್ಪನ್ನ ದತ್ತಾಂಶ ಹರಿವು ಇದ್ದರೆ, ಅದರ ಆಧಾರದಲ್ಲಿ ಪ್ಲಗಿನ್ ಅಭಿಯಾನ, ಜಾಹೀರಾತು ಗುಂಪು ಮತ್ತು ಜಾಹೀರಾತು ಮಾದರಿಯನ್ನು ರಚಿಸಬಹುದು. ಉತ್ಪನ್ನಗಳ ಚಿತ್ರಗಳನ್ನು ದತ್ತಾಂಶ ಹರಿವಿನಿಂದ ಪಡೆಯಲಾಗುತ್ತದೆ. ಉತ್ಪನ್ನ ದತ್ತಾಂಶ ಹರಿವು ಆಧಾರಿತ ಪ್ರತಿ ಜಾಹೀರಾತು ಗುಂಪು, ಆರ್ಕೈವ್ ಮಾಡದ ಒಂದು ಜಾಹೀರಾತು ಮಾದರಿಯನ್ನು ಹೊಂದಿರಬಹುದು.
ಅಭಿಯಾನಗಳು, ಜಾಹೀರಾತು ಗುಂಪುಗಳು ಮತ್ತು ಜಾಹೀರಾತುಗಳನ್ನು ನಿರ್ವಹಿಸಿ
ಖಾತೆ, ಅಭಿಯಾನ, ಜಾಹೀರಾತು ಗುಂಪು ಅಥವಾ ಜಾಹೀರಾತನ್ನು ಅದರ ಹೆಸರಿನಿಂದ ಹುಡುಕಲು ನೀವು ಪ್ಲಗಿನ್ಗೆ ಹೇಳಬಹುದು. ಇದು ಈ ಕಾರ್ಯಗಳನ್ನು ಮಾಡಬಹುದು:
ಪ್ರಸ್ತುತ ಸೆಟ್ಟಿಂಗ್ಗಳು ಮತ್ತು ಸ್ಥಿತಿಗಳನ್ನು ಪರಿಶೀಲಿಸುವುದು
ಅಭಿಯಾನ ಅಥವಾ ಜಾಹೀರಾತು ಗುಂಪನ್ನು ನೇರವಾಗಿ ರಚಿಸುವುದು
ಈಗಿರುವ ಜಾಹೀರಾತಿನ ಮುನ್ನೋಟ ತೋರಿಸುವುದು
ಅಭಿಯಾನ, ಜಾಹೀರಾತು ಗುಂಪು ಮತ್ತು ಜಾಹೀರಾತಿನ ಬೆಂಬಲಿತ ಸೆಟ್ಟಿಂಗ್ಗಳನ್ನು ನವೀಕರಿಸುವುದು
ಬೆಂಬಲಿತ ಸಂಪನ್ಮೂಲಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು, ಸಕ್ರಿಯಗೊಳಿಸುವುದು ಅಥವಾ ಆರ್ಕೈವ್ ಮಾಡುವುದು
ಈಗಿರುವ ಜಾಹೀರಾತಿನ ಚಿತ್ರವನ್ನು ಬದಲಿಸುವುದು
ಪ್ರತಿ ಬದಲಾವಣೆಯೂ ನಿರ್ದಿಷ್ಟ ಸಂಪನ್ಮೂಲಕ್ಕೆ ಸೀಮಿತವಾಗಿರುತ್ತದೆ. ಅನುಮೋದನೆ ಕೇಳುವ ಮೊದಲು ಪ್ಲಗಿನ್ ಖಾತೆ, ಪ್ರಸ್ತುತ ಸ್ಥಿತಿ, ಪ್ರಸ್ತಾಪಿತ ಸ್ಥಿತಿ ಮತ್ತು ಬದಲಾಗಲಿರುವ ನಿಖರ ಮೌಲ್ಯಗಳನ್ನು ತೋರಿಸುತ್ತದೆ. ನವೀಕರಣ ಯಶಸ್ವಿಯಾದ ನಂತರ, ಫಲಿತಾಂಶವನ್ನು ದೃಢಪಡಿಸಲು ಇದು ಸಂಪನ್ಮೂಲದ ಮಾಹಿತಿಯನ್ನು ಮತ್ತೊಮ್ಮೆ ಓದುತ್ತದೆ.
ChatGPT ಜಾಹೀರಾತುಗಳಿಗಾಗಿ ಅಭಿಯಾನಗಳನ್ನು ರಚಿಸಿ ಮತ್ತು ಅಭಿಯಾನಗಳನ್ನು ಸಂಪಾದಿಸಿ ನೋಡಿ.
ಕಾರ್ಯಕ್ಷಮತೆ ಮತ್ತು ಪರಿವರ್ತನೆಗಳನ್ನು ವಿಶ್ಲೇಷಿಸಿ
ಪ್ಲಗಿನ್ ಸಂಪೂರ್ಣ ಖಾತೆಯ ಅಥವಾ ನಿರ್ದಿಷ್ಟ ಅಭಿಯಾನ, ಜಾಹೀರಾತು ಗುಂಪು ಅಥವಾ ಜಾಹೀರಾತಿನ ಫಲಿತಾಂಶಗಳನ್ನು ವಿಶ್ಲೇಷಿಸಬಹುದು. ನೀವು ಇದನ್ನು ಈ ಕಾರ್ಯಗಳಿಗೆ ಬಳಸಬಹುದು:
ಅಭಿಯಾನಗಳು, ಜಾಹೀರಾತು ಗುಂಪುಗಳು ಅಥವಾ ಜಾಹೀರಾತುಗಳನ್ನು ಹೋಲಿಸಿ ಶ್ರೇಣೀಕರಿಸುವುದು
ಪ್ರದರ್ಶನಗಳ ಸಂಖ್ಯೆ, ಕ್ಲಿಕ್ಗಳು, ವೆಚ್ಚ, ಕ್ಲಿಕ್ ದರ, ಪ್ರತಿ ಕ್ಲಿಕ್ನ ಸರಾಸರಿ ವೆಚ್ಚ ಮತ್ತು ಪ್ರತಿ ಸಾವಿರ ಪ್ರದರ್ಶನಗಳ ಸರಾಸರಿ ವೆಚ್ಚವನ್ನು ಪರಿಶೀಲಿಸುವುದು
ಪರಿವರ್ತನೆ ಮಾಪನವನ್ನು ಹೊಂದಿಸಿದಾಗ, ಜಾಹೀರಾತುಗಳಿಗೆ ಸಂಬಂಧ ಕಲ್ಪಿಸಲಾದ ಪರಿವರ್ತನೆಗಳನ್ನು ವಿಶ್ಲೇಷಿಸುವುದು
ಆಯ್ದ ದಿನಾಂಕದ ವ್ಯಾಪ್ತಿಯಲ್ಲಿನ ಪ್ರವೃತ್ತಿಗಳನ್ನು ಪರಿಶೀಲಿಸುವುದು
ಬೆಂಬಲಿತ ಫಲಿತಾಂಶಗಳನ್ನು ಸಮಯ, ಸಾಧನ, ದೇಶ ಅಥವಾ ಉಪಸಂಪನ್ಮೂಲದ ಪ್ರಕಾರ ವಿಭಜಿಸಿ ನೋಡುವುದು
ಪರಿವರ್ತನೆಯ ಮೂಲಗಳು ಮತ್ತು ಸೆಟ್ಟಿಂಗ್ಗಳನ್ನು ಪರಿಶೀಲಿಸುವುದು ಅಥವಾ ಸಮಸ್ಯೆ ಪತ್ತೆಹಚ್ಚಲು ಇತ್ತೀಚಿನ ಸಂಸ್ಕರಿಸದ ಪರಿವರ್ತನೆ ಘಟನೆಗಳನ್ನು ತಪಾಸಣೆ ಮಾಡುವುದು
ನೀವು ದಿನಾಂಕದ ವ್ಯಾಪ್ತಿಯನ್ನು ನೀಡದಿದ್ದರೆ, ಪ್ಲಗಿನ್ ಖಾತೆಯ ಸ್ಥಳೀಯ ಸಮಯ ವಲಯದ ಪ್ರಕಾರ ಕಳೆದ ಏಳು ಪೂರ್ಣ ದಿನಗಳನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡುತ್ತದೆ. ಫಲಿತಾಂಶಗಳು ಜಾಹೀರಾತು ವ್ಯವಸ್ಥಾಪಕದಲ್ಲಿ ಪ್ರಸ್ತುತ ಲಭ್ಯವಿರುವ ದತ್ತಾಂಶವನ್ನು ಪ್ರತಿಬಿಂಬಿಸುತ್ತವೆ. ವರದಿ ಮಾಡುವಿಕೆ ಮತ್ತು ಪರಿವರ್ತನೆಗಳಿಗೆ ಜಾಹೀರಾತಿನ ಸಂಬಂಧ ಕಲ್ಪಿಸುವಿಕೆಯಲ್ಲಿ ಉಂಟಾಗುವ ಸಾಮಾನ್ಯ ವಿಳಂಬಗಳು ಇವುಗಳಿಗೂ ಅನ್ವಯಿಸುತ್ತವೆ.
ಫಲಿತಾಂಶಗಳನ್ನು ಅಳೆಯಿರಿ ಮತ್ತು ಪರಿವರ್ತನೆ ಮಾಪನ ನೋಡಿ.
ಒಮ್ಮೆ ಅಥವಾ ನಿಯಮಿತವಾಗಿ ಶಿಫಾರಸುಗಳನ್ನು ಪಡೆಯಿರಿ
ನಿಮ್ಮ ಸಕ್ರಿಯ ಅಭಿಯಾನಗಳನ್ನು ಒಮ್ಮೆ ವಿಮರ್ಶಿಸಲು ಪ್ಲಗಿನ್ಗೆ ಹೇಳಿ ಅಥವಾ ಕಾಲಕ್ರಮೇಣ ಕಾರ್ಯಕ್ಷಮತೆಯನ್ನು ಗಮನಿಸಲು ದೈನಂದಿನ ಅಥವಾ ಸಾಪ್ತಾಹಿಕ ವಿಮರ್ಶೆಗಳನ್ನು ನಿಗದಿಪಡಿಸಿ. ಇದು ಸಿದ್ಧತೆ, ಜಾಹೀರಾತು ಪ್ರದರ್ಶನ ಮತ್ತು ಮಾಪನವನ್ನು ಪರಿಶೀಲಿಸಿ, ನಂತರ ಬಜೆಟ್, ಬಿಡ್ಗಳು, ಗುರಿ ಪ್ರೇಕ್ಷಕರ ಆಯ್ಕೆ, ಜಾಹೀರಾತು ಪಠ್ಯ ಮತ್ತು ಸಾಮಗ್ರಿಯಲ್ಲಿನ ಸುಧಾರಣೆಯ ಅವಕಾಶಗಳನ್ನು ಆದ್ಯತೆಯ ಕ್ರಮದಲ್ಲಿ ನೀಡುತ್ತದೆ. ವಿಮರ್ಶೆಗಳು ಪೂರಕ ಸಾಕ್ಷ್ಯ ಮತ್ತು ಸ್ಪಷ್ಟ ಮುಂದಿನ ಕ್ರಮಗಳನ್ನು ಒಳಗೊಂಡಿರುತ್ತವೆ, ಆದರೆ ನಿಮ್ಮ ಖಾತೆಯಲ್ಲಿ ಎಂದಿಗೂ ಬದಲಾವಣೆ ಮಾಡುವುದಿಲ್ಲ. ನಿಯಮಿತ ವಿಮರ್ಶೆಯ ವೇಳಾಪಟ್ಟಿಯನ್ನು ದೃಢೀಕರಿಸುವ ಮೊದಲು ನೀವು ಅದರ ಮುನ್ನೋಟ ನೋಡಬಹುದು.
ಜಾಹೀರಾತು ಪ್ರದರ್ಶನದ ಸಮಸ್ಯೆಗಳನ್ನು ನಿವಾರಿಸಿ
ಅಭಿಯಾನದ ಜಾಹೀರಾತುಗಳು ಪ್ರದರ್ಶನಗೊಳ್ಳದಿದ್ದರೆ ಅಥವಾ ಅವುಗಳ ಪ್ರದರ್ಶನದ ಪ್ರಮಾಣ ಹೆಚ್ಚದಿದ್ದರೆ, ಪ್ಲಗಿನ್ ಖಾತೆಯಿಂದ ಅಭಿಯಾನ, ಜಾಹೀರಾತು ಗುಂಪು, ಜಾಹೀರಾತು ಮತ್ತು ಮಾಪನದವರೆಗಿನ ಹಂತಗಳನ್ನು ಪರಿಶೀಲಿಸಬಹುದು. ಇದು ತನ್ನ ವ್ಯಾಪ್ತಿಯಲ್ಲಿರುವ ಮೊದಲ ಅಡಚಣೆಯನ್ನು ಗುರುತಿಸುತ್ತದೆ, ಖಾತೆಯಲ್ಲಿ ಕಂಡುಬಂದ ಸಾಕ್ಷ್ಯವನ್ನು ಅದರ ವ್ಯಾಖ್ಯಾನದಿಂದ ಪ್ರತ್ಯೇಕಿಸುತ್ತದೆ ಮತ್ತು ಆದ್ಯತೆಯ ಕ್ರಮದಲ್ಲಿ ಚೇತರಿಕೆ ಯೋಜನೆಯನ್ನು ನೀಡುತ್ತದೆ. ಸಮಸ್ಯೆಯ ಪತ್ತೆಗಾಗಿ ಮಾಹಿತಿಯನ್ನು ಓದಲಾಗುತ್ತದೆ ಅಷ್ಟೇ; ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
ಸಾಮಾನ್ಯ ಸಮಸ್ಯೆಗಳ ನಿವಾರಣೆ ನೋಡಿ.
ವ್ಯವಹಾರ ಜಾಹೀರಾತು ಖಾತೆಯನ್ನು ಹೊಂದಿಸಿ ಮತ್ತು ನಿರ್ವಹಿಸಿ
ಸ್ವಯಂ ಖಾತೆ ಹೊಂದಿಸುವ ಸೌಲಭ್ಯ ಲಭ್ಯವಿರುವಲ್ಲಿ, ಜಾಹೀರಾತುದಾರರು ತಮ್ಮ ಸ್ವಂತ ವ್ಯವಹಾರಕ್ಕಾಗಿ ಒಂದು ಜಾಹೀರಾತು ಖಾತೆ ರಚಿಸಲು ಪ್ಲಗಿನ್ ಮಾರ್ಗದರ್ಶನ ನೀಡಬಹುದು. ಇದು ನಿಮಗೆ ಈ ಕಾರ್ಯಗಳಲ್ಲಿ ಸಹಾಯ ಮಾಡಬಹುದು:
ವ್ಯವಹಾರ, ಜಾಲತಾಣ, ಖಾತೆ, ಉದ್ಯಮ ವಲಯ, ದೇಶ, ಕರೆನ್ಸಿ ಮತ್ತು ಸಮಯ ವಲಯದ ವಿವರಗಳನ್ನು ನಮೂದಿಸುವುದು
ಲಾಂಛನವನ್ನು ಲಗತ್ತಿಸುವುದು, ಚಿತ್ರದ ನಿಖರ ಕೊಂಡಿಯನ್ನು ಬಳಸುವುದು, ಸಂಬಂಧಿತ ಆಯ್ಕೆಯನ್ನು ಆರಿಸಿದ ನಂತರ ಲಾಂಛನ ರಚಿಸುವುದು ಅಥವಾ ಲಾಂಛನ ಸೇರಿಸುವುದನ್ನು ಮುಂದೂಡುವುದು
ಖಾತೆಯ ಮಾಲೀಕತ್ವ ಹೊಂದಬೇಕಾದ ವ್ಯವಹಾರವನ್ನು ಆಯ್ಕೆ ಮಾಡುವುದು
ಅಂತಿಮ ವಿವರಗಳನ್ನು ಪರಿಶೀಲಿಸಿ, ಅನ್ವಯಿಸುವ ನಿಯಮಗಳನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವುದು
ಈಗಿರುವ ಖಾತೆಗೆ ಸಂಬಂಧಿಸಿದಂತೆ, ಪ್ಲಗಿನ್ ಬಳಕೆದಾರರು ಮತ್ತು ಬಾಕಿ ಇರುವ ಆಹ್ವಾನಗಳ ಪಟ್ಟಿಯನ್ನು ನೀಡಬಹುದು, ಬಳಕೆದಾರರನ್ನು ಆಹ್ವಾನಿಸಬಹುದು, ಪಾತ್ರಗಳನ್ನು ಬದಲಾಯಿಸಬಹುದು, ಸಕ್ರಿಯ ಬಳಕೆದಾರರನ್ನು ತೆಗೆದುಹಾಕಬಹುದು ಮತ್ತು ಖಾತೆಯ ಲಾಂಛನವನ್ನು ಬದಲಿಸಬಹುದು. ಬದಲಿಯಾಗಿ ಸೇರಿಸಿದ ಲಾಂಛನವು ಬ್ರ್ಯಾಂಡ್ ಪರಿಶೀಲನೆಗೆ ಒಳಪಡುತ್ತದೆ. ಅದಕ್ಕೆ ಅನುಮೋದನೆ ದೊರೆಯುವವರೆಗೆ ಪ್ರಸ್ತುತ ಸಾರ್ವಜನಿಕವಾಗಿ ಕಾಣುವ ಲಾಂಛನವೇ ಸಕ್ರಿಯವಾಗಿರುತ್ತದೆ.
ಗುರುತಿನ ಪರಿಶೀಲನೆ, ಬಿಲ್ಲಿಂಗ್, ಪಾವತಿ, ತೆರಿಗೆ ಮತ್ತು ಇತರ ಸಿದ್ಧತಾ ಹಂತಗಳನ್ನು ಜಾಹೀರಾತು ವ್ಯವಸ್ಥಾಪಕದಲ್ಲೇ ಪೂರ್ಣಗೊಳಿಸಬೇಕು. ಜಾಹೀರಾತು ವ್ಯವಸ್ಥಾಪಕ ಖಾತೆ ಹೊಂದಿಸುವಿಕೆ ನೋಡಿ.
ದೃಢೀಕರಣಗಳು ಹೇಗೆ ಕೆಲಸ ಮಾಡುತ್ತವೆ
ಪ್ಲಗಿನ್ ಮಾಹಿತಿಯ ಪರಿಶೀಲನೆ ಮತ್ತು ಬದಲಾವಣೆ ಮಾಡುವ ಕ್ರಿಯೆಯನ್ನು ಪ್ರತ್ಯೇಕವಾಗಿ ಪರಿಗಣಿಸುತ್ತದೆ:
ಖಾತೆಯ ದತ್ತಾಂಶ ಓದುವುದು, ಕಾರ್ಯಕ್ಷಮತೆಯ ವಿಶ್ಲೇಷಣೆ, ಸಮಸ್ಯೆಗಳ ನಿವಾರಣೆ ಮತ್ತು ಶಿಫಾರಸು ನೀಡುವ ವಿಮರ್ಶೆಗಳು ನಿಮ್ಮ ಖಾತೆಯಲ್ಲಿ ಬದಲಾವಣೆ ಮಾಡುವುದಿಲ್ಲ.
ಜಾಹೀರಾತಿನ ಕರಡು ರಚಿಸುವುದರಿಂದ ಅಥವಾ ಮುನ್ನೋಟ ನೋಡುವುದರಿಂದ ಅದು ಅಪ್ಲೋಡ್ ಆಗುವುದಿಲ್ಲ ಅಥವಾ ಪ್ರಕಟಗೊಳ್ಳುವುದಿಲ್ಲ.
ಜಾಹೀರಾತು ಸಾಮಗ್ರಿಯನ್ನು ಅಪ್ಲೋಡ್ ಮಾಡಲು ಅಥವಾ ಖಾತೆ, ಅಭಿಯಾನ, ಜಾಹೀರಾತು ಗುಂಪು, ಜಾಹೀರಾತು, ಲಾಂಛನ ಅಥವಾ ಬಳಕೆದಾರರ ಪ್ರವೇಶಾಧಿಕಾರವನ್ನು ರಚಿಸಲು ಅಥವಾ ನವೀಕರಿಸಲು, ಕೈಗೊಳ್ಳಲಿರುವ ನಿರ್ದಿಷ್ಟ ಕ್ರಮಕ್ಕೆ ದೃಢೀಕರಣ ಅಗತ್ಯ.
ಖಾತೆ ರಚಿಸಲು ಜಾಹೀರಾತು ನಿಯಮಗಳು ಮತ್ತು ಪ್ರೈವಸಿ ಪಾಲಿಸಿಯನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವುದೂ ಅಗತ್ಯ.
ಅನುಮೋದನೆಯ ನಂತರ ಪ್ರಸ್ತಾಪಿತ ವಿವರಗಳಲ್ಲಿ ಯಾವುದೇ ಬದಲಾವಣೆಯಾದರೆ, ಪ್ಲಗಿನ್ ನವೀಕರಿಸಿದ ಪ್ರಸ್ತಾವನೆಯನ್ನು ತೋರಿಸಿ, ಮುಂದುವರಿಯುವ ಮೊದಲು ಮತ್ತೊಮ್ಮೆ ದೃಢೀಕರಣ ಕೇಳುತ್ತದೆ.
ವಿನಂತಿಗಳ ಉದಾಹರಣೆಗಳು
“ಈ ಉತ್ಪನ್ನದ ಪುಟದಿಂದ ಆರು ಜಾಹೀರಾತು ರೂಪಾಂತರಗಳನ್ನು ರಚಿಸಿ.”
“ನನ್ನ ಸಕ್ರಿಯ ಉತ್ಪನ್ನ ದತ್ತಾಂಶ ಹರಿವನ್ನು ಬಳಸಿ ಅದರ ಆಧಾರಿತ ಅಭಿಯಾನ ರಚಿಸಿ.”
“ಕಳೆದ ಏಳು ಪೂರ್ಣ ದಿನಗಳಲ್ಲಿನ ನನ್ನ ಅಭಿಯಾನಗಳನ್ನು ಹೋಲಿಸಿ.”
“ನನ್ನ ವಸಂತ ಋತುವಿನ ಬಿಡುಗಡೆ ಅಭಿಯಾನದ ಜಾಹೀರಾತುಗಳು ಏಕೆ ಪ್ರದರ್ಶನಗೊಳ್ಳುತ್ತಿಲ್ಲ.”
“ಮುಖ್ಯ ಮಾರುಕಟ್ಟೆ ಅಧಿಕಾರಿಯ ದೃಷ್ಟಿಕೋನದಿಂದ ನನ್ನ ಸಕ್ರಿಯ ಅಭಿಯಾನಗಳ ವಿಮರ್ಶೆ ನೀಡಿ.”
“ಶಿಫಾರಸುಗಳಿಗೆ ಮಾತ್ರ ಸೀಮಿತವಾದ ಸಾಪ್ತಾಹಿಕ ವಿಮರ್ಶೆಯನ್ನು ನಿಗದಿಪಡಿಸಿ.”
“ನನ್ನ ಬ್ರ್ಯಾಂಡ್ ಪರಿಚಯ ಅಭಿಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಿ.”
“ನನ್ನ ತಂಡದ ಸಹೋದ್ಯೋಗಿಯನ್ನು ಈ ಜಾಹೀರಾತು ಖಾತೆಗೆ ಸದಸ್ಯರಾಗಿ ಆಹ್ವಾನಿಸಿ.”
“ನನ್ನ ವ್ಯವಹಾರಕ್ಕಾಗಿ ಜಾಹೀರಾತು ಖಾತೆ ರಚಿಸಲು ಸಹಾಯ ಮಾಡಿ.”
ಖಾತೆ ಅಥವಾ ಅಭಿಯಾನದ ಹೆಸರು ಮತ್ತು ದಿನಾಂಕದ ವ್ಯಾಪ್ತಿಯನ್ನು ಸೇರಿಸಿದರೆ ಸಾಮಾನ್ಯವಾಗಿ ಹೆಚ್ಚು ನಿಖರವಾದ ಫಲಿತಾಂಶ ದೊರೆಯುತ್ತದೆ. ನೀವು ಸಂಪನ್ಮೂಲಗಳ ಆಂತರಿಕ ಗುರುತುಸಂಖ್ಯೆಗಳನ್ನು ನೀಡುವ ಅಗತ್ಯವಿಲ್ಲ.
ಪ್ರಸ್ತುತ ಮಿತಿಗಳು
ಸಂಪರ್ಕಿಸಲಾದ ನಿಮ್ಮ ಜಾಹೀರಾತು ವ್ಯವಸ್ಥಾಪಕ ಬಳಕೆದಾರ ಗುರುತಿಗೆ ಲಭ್ಯವಿರುವ ಖಾತೆಗಳು ಮತ್ತು ಸಂಪನ್ಮೂಲಗಳನ್ನು ಮಾತ್ರ ಪ್ಲಗಿನ್ ಪ್ರವೇಶಿಸಬಹುದು. ಲಭ್ಯವಿರುವ ಕ್ರಮಗಳು ನಿಮ್ಮ ಪಾತ್ರ ಮತ್ತು ಖಾತೆಯಲ್ಲಿ ಸಕ್ರಿಯಗೊಳಿಸಲಾದ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತವೆ.
ಒಂದೇ ವಿನ್ಯಾಸಕ್ಕೆ ಹೊಂದುವ ಹಲವು ಜಾಹೀರಾತುಗಳನ್ನು ರಚಿಸುವ ವಿನಂತಿಯಲ್ಲಿ ಪ್ರಮಾಣಿತ ಜಾಹೀರಾತುಗಳಿಗೆ ಮಾತ್ರ ಬೆಂಬಲವಿದೆ. ಪ್ರತಿ ವಿನಂತಿಯಲ್ಲಿ ಗರಿಷ್ಠ 50 ಹೊಸ ಜಾಹೀರಾತುಗಳನ್ನು ರಚಿಸಬಹುದು. ಈ ರೂಪಾಂತರಗಳು ಒಂದೇ ಅನುಮೋದಿತ ಚಿತ್ರ, ಚಿತ್ರದ ಕತ್ತರಿಸಿದ ಭಾಗ ಮತ್ತು ಗಮ್ಯಸ್ಥಾನವನ್ನು ಬಳಸುತ್ತವೆ.
ಉತ್ಪನ್ನ ದತ್ತಾಂಶ ಹರಿವು ಆಧಾರಿತ ಜಾಹೀರಾತು ಗುಂಪು, ಆರ್ಕೈವ್ ಮಾಡದ ಒಂದು ಜಾಹೀರಾತು ಮಾದರಿಯನ್ನು ಹೊಂದಿರಬಹುದು. ವ್ಯವಹಾರ ಏಜೆಂಟ್ ಜಾಹೀರಾತುಗಳ ರಚನೆಗೆ ಬೆಂಬಲವಿಲ್ಲ.
ಬಿಲ್ಲಿಂಗ್, ಪಾವತಿ ವಿಧಾನಗಳು, ತೆರಿಗೆ ವಿವರಗಳು, ಕಾನೂನುಬದ್ಧ ಗುರುತಿನ ಮಾಹಿತಿ ಮತ್ತು ಮೇಲ್ಮನವಿಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೇರವಾಗಿ ಜಾಹೀರಾತು ವ್ಯವಸ್ಥಾಪಕದಲ್ಲೇ ಪೂರ್ಣಗೊಳಿಸಬೇಕು.
ನಿಯಮಿತ ವಿಮರ್ಶೆಗಳು ಶಿಫಾರಸುಗಳಿಗೆ ಮಾತ್ರ ಸೀಮಿತವಾಗಿರುತ್ತವೆ; ಅವು ಅಭಿಯಾನಗಳಲ್ಲಿ ಸ್ವಯಂಚಾಲಿತ ಬದಲಾವಣೆಗಳನ್ನು ಮಾಡುವುದಿಲ್ಲ.
ಇತ್ತೀಚಿನ ಸಂಸ್ಕರಿಸದ ಪರಿವರ್ತನೆ ಘಟನೆಗಳ ತಪಾಸಣೆಯು ಕಳೆದ 15 ನಿಮಿಷಗಳಲ್ಲಿನ ಕೊನೆಯ 50 ಘಟನೆಗಳಿಗೆ ಸೀಮಿತವಾಗಿದೆ; ಅದು ಹಿಂದಿನ ಅವಧಿಗಳ ವರದಿಯಲ್ಲ. ಪ್ಲಗಿನ್ಗೆ ಪರಿವರ್ತನೆ ಮೌಲ್ಯ ದೊರೆಯುವುದಿಲ್ಲ. ಆದ್ದರಿಂದ ಅದು ಆದಾಯ ಅಥವಾ ಜಾಹೀರಾತು ವೆಚ್ಚದ ಮೇಲಿನ ಪ್ರತಿಫಲವನ್ನು ವರದಿ ಮಾಡುವುದಿಲ್ಲ.
ಪರಿಶೀಲನೆ, ನೀತಿ ವಿಮರ್ಶೆ, ಖಾತೆಯ ಅರ್ಹತೆ ಅಥವಾ ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಪ್ಲಗಿನ್ ಬದಲಾಯಿಸಲಾರದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಜಾಹೀರಾತಿನ ಕರಡು ರಚಿಸಲು ನನಗೆ ಜಾಹೀರಾತು ವ್ಯವಸ್ಥಾಪಕ ಖಾತೆ ಬೇಕೇ.
ಇಲ್ಲ. ಖಾತೆಯನ್ನು ಆಯ್ಕೆ ಮಾಡುವ ಮೊದಲೇ ನೀವು ಜಾಹೀರಾತು ಸಾಮಗ್ರಿಯ ಕರಡು ರಚಿಸಿ, ಮುನ್ನೋಟ ನೋಡಬಹುದು. ಜಾಹೀರಾತು ಸಾಮಗ್ರಿಯನ್ನು ಅಪ್ಲೋಡ್ ಮಾಡಲು ಅಥವಾ ಜಾಹೀರಾತನ್ನು ಉಳಿಸಲು, ಬದಲಾವಣೆ ಮಾಡುವ ಪ್ರವೇಶಾಧಿಕಾರವಿರುವ ಅರ್ಹ ಜಾಹೀರಾತು ವ್ಯವಸ್ಥಾಪಕ ಖಾತೆ ಅಗತ್ಯ.
ಪ್ಲಗಿನ್ ಒಂದೇ ಬಾರಿ ಹಲವು ಜಾಹೀರಾತುಗಳನ್ನು ರಚಿಸಬಹುದೇ.
ಹೌದು. ಒಂದೇ ಅನುಮೋದಿತ ಚಿತ್ರ, ಚಿತ್ರದ ಕತ್ತರಿಸಿದ ಭಾಗ ಮತ್ತು ಗಮ್ಯಸ್ಥಾನವನ್ನು ಬಳಸುವ, ಪರಸ್ಪರ ಹೊಂದುವ ಪ್ರಮಾಣಿತ ಜಾಹೀರಾತು ರೂಪಾಂತರಗಳ ಗುಚ್ಛವನ್ನು ಇದು ರಚಿಸಬಹುದು. ಪ್ರತಿ ವಿನಂತಿಯಲ್ಲಿ ಗರಿಷ್ಠ 50 ಹೊಸ ಜಾಹೀರಾತುಗಳನ್ನು ರಚಿಸಬಹುದು. ಉತ್ಪನ್ನ ದತ್ತಾಂಶ ಹರಿವು ಆಧಾರಿತ ಪ್ರತಿ ಜಾಹೀರಾತು ಗುಂಪು, ಆರ್ಕೈವ್ ಮಾಡದ ಒಂದು ಜಾಹೀರಾತು ಮಾದರಿಯನ್ನು ಹೊಂದಿರಬಹುದು.
ಪ್ಲಗಿನ್ ನನ್ನನ್ನು ಕೇಳದೆ ಬದಲಾವಣೆ ಮಾಡುತ್ತದೆಯೇ.
ಇಲ್ಲ. ಜಾಹೀರಾತು ಸಾಮಗ್ರಿಯನ್ನು ಅಪ್ಲೋಡ್ ಮಾಡುವ ಅಥವಾ ಜಾಹೀರಾತು ವ್ಯವಸ್ಥಾಪಕದ ಸಂಪನ್ಮೂಲಗಳನ್ನು ರಚಿಸುವ ಅಥವಾ ನವೀಕರಿಸುವ ಮೊದಲು, ಇದು ಸಂಪೂರ್ಣ ಪ್ರಸ್ತಾವನೆಯನ್ನು ತೋರಿಸಿ ದೃಢೀಕರಣ ಕೇಳುತ್ತದೆ.
ನಿಯಮಿತ ವಿಮರ್ಶೆಗಳು ನನ್ನ ಅಭಿಯಾನಗಳನ್ನು ಸ್ವಯಂಚಾಲಿತವಾಗಿ ಉತ್ತಮಗೊಳಿಸಬಹುದೇ.
ಇಲ್ಲ. ಒಮ್ಮೆ ನಡೆಸುವ ಮತ್ತು ನಿಗದಿತ ವಿಮರ್ಶೆಗಳಲ್ಲಿ ಮಾಹಿತಿಯನ್ನು ಓದಲಾಗುತ್ತದೆ ಅಷ್ಟೇ; ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಅವು ಶಿಫಾರಸುಗಳನ್ನು ನೀಡುತ್ತವೆ. ನಂತರ ಕೈಗೊಳ್ಳಬಹುದಾದ ಯಾವುದೇ ಬೆಂಬಲಿತ ಬದಲಾವಣೆಯನ್ನು ನಿಮ್ಮ ಅನುಮೋದನೆಗಾಗಿ ಪ್ರತ್ಯೇಕವಾಗಿ ಪ್ರಸ್ತುತಪಡಿಸಲಾಗುತ್ತದೆ.
ಅಭಿಯಾನದ ಜಾಹೀರಾತುಗಳು ಪ್ರದರ್ಶನಗೊಳ್ಳುತ್ತವೆ ಎಂದು ಪ್ಲಗಿನ್ ಖಾತರಿ ನೀಡಬಹುದೇ.
ಇಲ್ಲ. ಇದು ತನ್ನ ವ್ಯಾಪ್ತಿಯಲ್ಲಿರುವ ಅಡೆತಡೆಗಳನ್ನು ಗುರುತಿಸಬಹುದು, ಕಾರ್ಯಕ್ಷಮತೆಯನ್ನು ವಿಶ್ಲೇಷಿಸಬಹುದು ಮತ್ತು ಮುಂದಿನ ಕ್ರಮಗಳನ್ನು ಶಿಫಾರಸು ಮಾಡಬಹುದು. ಆದರೆ ಜಾಹೀರಾತುಗಳ ಪ್ರದರ್ಶನವು ಖಾತೆಯ ಸಿದ್ಧತೆ, ಪರಿಶೀಲನೆ, ಗುರಿ ಪ್ರೇಕ್ಷಕರ ಆಯ್ಕೆ, ಬಜೆಟ್, ಲಭ್ಯವಿರುವ ಅವಕಾಶಗಳು ಮತ್ತು ಜಾಹೀರಾತು ವ್ಯವಸ್ಥಾಪಕದ ಇತರ ಅಂಶಗಳನ್ನು ಅವಲಂಬಿಸಿರುತ್ತದೆ.
ಪ್ಲಗಿನ್ ನನ್ನ ಪರವಾಗಿ ಬಿಲ್ಲಿಂಗ್ ಅಥವಾ ಗುರುತಿನ ಪರಿಶೀಲನೆಯನ್ನು ನಿರ್ವಹಿಸಬಹುದೇ.
ಇಲ್ಲ. ಇದು ಖಾತೆಯ ಸಿದ್ಧತಾ ಸ್ಥಿತಿಯನ್ನು ಸೀಮಿತ ಮಟ್ಟದಲ್ಲಿ ಪರಿಶೀಲಿಸಿ, ಸೂಕ್ತ ಮುಂದಿನ ಕ್ರಮದತ್ತ ಮಾರ್ಗದರ್ಶನ ನೀಡಬಹುದು. ಆದರೆ ಬಿಲ್ಲಿಂಗ್, ಪಾವತಿ, ತೆರಿಗೆ ಮತ್ತು ಕಾನೂನುಬದ್ಧ ಗುರುತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಜಾಹೀರಾತು ವ್ಯವಸ್ಥಾಪಕದಲ್ಲೇ ಮಾಡಬೇಕು.
